ಮಂಗ, ಬಾಲವಿಲ್ಲದ

	ಪ್ರೈಮೇಟ್ ಗಣದ ಆಂತ್ರಪ್ರಾಯ್ಡಿಯ ಗುಂಪಿಗೆ ಸೇರಿದ ಬೃಹತ್ ಕಪಿ (ಏಪ್). ಇದರಲ್ಲಿ ಗಿಬ್ಬನ್, ಒರಾಂಗೂಟಾನ್, ಗೊರಿಲ್ಲ ಮತ್ತು ಚಿಂಪ್ಯಾಂಜಿ ಎಂಬ ನಾಲ್ಕು ಜಾತಿಗಳುಂಟು. ಮೊದಲೆರಡು ಮಂಗಗಳು ಏಷ್ಯಕ್ಕೂ ಉಳಿದವೆರಡು ಆಫ್ರಿಕಕ್ಕೂ ಸೀಮಿತವಾಗಿವೆ. ಆಗ್ನೇಯ ಏಷ್ಯವಾಸಿಯಾದ ಗಿಬ್ಬನ್ ಮಂಗನ ಕೆಲವು ಲಕ್ಷಣಗಳನ್ನುಳಿಸಿಕೊಂಡಿದ್ದರೂ ಮಾನವನಂತೆ ದ್ವಿಪಾದಿ. ಆದರೆ ಕಾಲುಗಳನ್ನು ನೆಟ್ಟಗೆ ಇಡದೆ ಮಡಚಿಕೊಂಡೇ ಇರುತ್ತದೆ. ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತ ಸಸ್ಯಾಹಾರಿಯಾಗಿದ್ದರೂ ಹುಳಹುಪ್ಪಟೆ, ಹಕ್ಕಿ ಮತ್ತು ಅದರ ಮೊಟ್ಟೆಗಳನ್ನು ತಿನ್ನುತ್ತದೆ. ಸುಮಾತ್ರ-ಬೋರ್ನಿಯೊ ದ್ವೀಪ ವಾಸಿಯಾದ ಒರಾಂಗೂಟಾನ್ ಮರಗಳ ಮೇಲೆ ವಾಸಿಸುತ್ತ ಕೊಂಬೆಯಿಂದ ಕೊಂಬೆಗೆ ನೆಗೆಯುವುದರಲ್ಲಿ ನಿಷ್ಣಾತ. ಸಸ್ಯಾಹಾರಿಯಾಗಿದ್ದು ಅರಣ್ಯಫಲಗಳನ್ನು ತಿನ್ನುತ್ತದೆ. ಆಫ್ರಿಕದ ಮಧ್ಯಪ್ರದೇಶವಾಸಿಯಾದ ಗೊರಿಲ್ಲ ಅತ್ಯಪೂರ್ವವಾದ್ದು. ಬೃಹತ್ ಮಂಗಗಳಲ್ಲಿ ಅದೇ ಅತ್ಯಂತ ದೊಡ್ಡದು. ನೆಲದಮೇಲೆ ವಾಸಿಸುವ ಇದು ಚತುಷ್ಟಾದಿಯಾಗಿದ್ದರೂ ಹಿಂಗಾಲುಗಳ ಮೇಲೆ ನಿಲ್ಲಬಲ್ಲದು. ಇದು ಕೂಡ ಸಸ್ಯಹಾರಿ ಚಿಂಪ್ಯಾಂಜಿ ಆಫ್ರಿಕದ ಉಷ್ಣಪ್ರದೇಶವಾಸಿ. ಮರಗಳ ಮೇಲೆ ನೆಗೆಯುತ್ತ ವೇಗವಾಗಿ ಚಲಿಸಬಲ್ಲದು. ಅನೇಕ ಬಗೆಯ ಸಸ್ಯಗಳನ್ನು ತಿನ್ನುತ್ತದೆ. ಇದು ಹಲವು ವಿಧವಾದ ಶಬ್ದಗಳನ್ನು ಮಾಡಬಲ್ಲುದಾದರೂ ಮಾತನಾಡಲಾರದು. ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ. 			
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ